ಶಿವಗಂಗೆ
	ಭಾರತದ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಒಂದು ಊರು ಮತ್ತು ಪವಿತ್ರ ಗಿರಿಕ್ಷೇತ್ರ. ನೆಲಮಂಗಲ-ಕುಣಿಗಲು ಮಾರ್ಗದಲ್ಲಿ ನೆಲಮಂಗಲದ ವಾಯವ್ಯಕ್ಕೆ 31 ಕಿಮೀ ದೂರದಲ್ಲಿದೆ. ಇದು ಸುತ್ತಲ ಹಳ್ಳಿಗಳ ವ್ಯಾಪಾರ ಕೇಂದ್ರ.

	ಈ ಊರಿಗೆ ಹೊಂದಿಕೊಂಡಂತಿರುವ ಶಿವಗಂಗೆ ಬೆಟ್ಟ 1,389.58 ಮೀ ಎತ್ತರವಿದೆ. ಇದನ್ನು ಕಕೋದ್ಗಿರಿಯೆಂದೂ ಕರೆಯುವುದುಂಟು. ಈ ಬೆಟ್ಟದ ಪೂರ್ವಕ್ಕೆ ಮಹಿಮೆರಂಗನ ಗುಡ್ಡ, ಪಶ್ಚಿಮಕ್ಕೆ ರಾಗಿಬೆಟ್ಟ (ರಾಮದೇವರ ಬೆಟ್ಟ) ಉತ್ತರಕ್ಕೆ ನರಸಿಂಹನ ಬೆಟ್ಟ, ದಕ್ಷಿಣಕ್ಕೆ ಕಾಚುಕಲ್ಲ ಪ್ಪನ ಬೆಟ್ಟ ಇವೆ. ಈ ಬೆಟ್ಟವನ್ನು ದಕ್ಷಿಣ ದಿಕ್ಕಿನಿಂದ ನೋಡಿದರೆ ವೃಷಭಾಕಾರವಾಗಿಯೂ ಪಶ್ಚಿಮ ದಿಕ್ಕಿನಿಂದ ನೋಡಿದಾಗ ಗಣೇಶಾಕಾ ರವಾಗಿಯೂ ಮತ್ತು ಉತ್ತರ ದಿಕ್ಕಿನಿಂದ ನೋಡಿದರೆ ಸರ್ಪಾಕಾರ ವಾಗಿಯೂ ಕಾಣುತ್ತದೆಯಂತೆ. ಈ ಕ್ಷೇತ್ರವನ್ನು ದಕ್ಷಿಣ ಕಾಶಿಯೆಂದೂ ಕರೆಯಲಾಗುತ್ತದೆ. ಈ ಸ್ಥಳವನ್ನು 12ನೆಯ ಶತಮಾನದಲ್ಲಿ ಶಿವಗಂಗೆ ಎಂಬ ಹೆಸರಿನಿಂದ ಕರೆಯಲಾಗಿದೆ. ಹೊಯ್ಸಳ ದೊರೆ ವಿಷ್ಣುವರ್ಧನನ ಪಟ್ಟಮಹಿಷಿ ಶಾಂತಲದೇವಿ 1131ರಲ್ಲಿ ಶಿವಗಂಗೆ ತೀರ್ಥದಲ್ಲಿ ಮುಡುಪಿ ಸ್ವರ್ಗಸ್ಥಳಾದಳೆಂದು ತಿಳಿದುಬರುತ್ತದೆ. ಈ ಕ್ಷೇತ್ರದ ಕಟ್ಟಡಗಳ ನಿರ್ಮಾತೃ ಮಾಗಡಿ ಕೆಂಪೇಗೌಡ.

	ಬೆಟ್ಟಕ್ಕೆ ಹೋಗುವ ಮಹಾದ್ವಾರದ ಬಳಿ ಕಮಲತೀರ್ಥವಿದೆ. ಈ ತೀರ್ಥದ ನಾಲ್ಕು ಕಡೆಗೂ ಪ್ರವೇಶದ್ವಾರಗಳು ಇದ್ದು ಇಲ್ಲಿಯ ಸೋಪಾನದ ಸುತ್ತಲೂ ರಾಮಾಯಣ, ಮಹಾಭಾರತ, ಭಾಗವತದ ಚಿತ್ರಗಳು ಕೆತ್ತಲ್ಪಟ್ಟಿವೆ. ಇಲ್ಲಿರುವ ಅಗಸ್ತ್ಯತೀರ್ಥದಲ್ಲಿ ಅಗಸ್ತ್ಯರು ತಪಸ್ಸು ಮಾಡಿದರೆಂದು ಪ್ರತೀತಿ. ಇಲ್ಲಿ ಅಗಸ್ತ್ಯೇಶ್ವರ ಲಿಂಗವಿದ್ದು ಈ ತೀರ್ಥದ ಸುತ್ತಲೂ 108 ಲಿಂಗಗಳಿವೆ.

	ಮಹಾದ್ವಾರದ ಎಡಭಾಗದಲ್ಲಿ ವಿಘ್ನೇಶ್ವರನ ವಿಗ್ರಹವಿದೆ. ಇದರ ಪಶ್ಚಿಮಕ್ಕೆ ವೀರಭದ್ರ ದೇವಾಲಯ, ಸ್ವಲ್ಪ ಮುಂದೆ ಬಲಭಾಗದಲ್ಲಿ ಷಣ್ಮುಖಸ್ವಾಮಿ ದೇವಾಲಯವಿದೆ. ಎರಡನೆಯ ಮಹಾದ್ವಾರದ ಪ್ರವೇಶದ ಹತ್ತಿರಕ್ಕಾದಂತೆ ಪಾತಾಳಗಂಗೆಗೆ ಮೆಟ್ಟಿಲುಗಳು ಇವೆ. ಇದರ ಪಕ್ಕದಲ್ಲೇ ವೀರಭದ್ರನಮೂರ್ತಿ ಇದೆ. ಇದೇ ಪ್ರಾಕಾರದ ಆಗ್ನೇಯ ದಿಕ್ಕಿನಿಂದ ಮುಂದುವರಿದರೆ ಪುರಾತನ ಹೊನ್ನಮ್ಮಗವಿ ಮಠವಿದೆ. ಇದರ ನೈಋತ್ಯಕ್ಕೆ ಶಂಕರಾಚಾರ್ಯರ ತೀರ್ಥವಿದೆ. ಇದನ್ನು ಶಂಬುತೀರ್ಥವೆಂದೂ ಕರೆಯುತ್ತಾರೆ. ಇದರ ಸನಿಹಕ್ಕಿರುವ ಗುಹೆಯೊಂದನ್ನು ಶಂಕರರ ಗುಹೆಯೆನ್ನುತ್ತಾರೆ.

	ಮೂರನೆಯ ಮಹಾದ್ವಾರದ ಬಳಿ ಹೊನ್ನಾದೇವಿ (ಸ್ವರ್ಣಾಂಬೆ) ಗುಹಾಂತರ ದೇವಾಲಯವಿದೆ. ಈ ದೇವಾಲಯ 40 ಅಡಿ ಚಚ್ಚೌಕವಾಗಿದೆ. ಹೊನ್ನಾದೇವಿಯ ಮೂರ್ತಿ 5 ಅಡಿ ಎತ್ತರವಾಗಿದ್ದು, ರಕ್ತ ಬೀಜಾಸುರ ನನ್ನು ಮರ್ದಿಸುವ ಭಂಗಿಯಲ್ಲಿದ್ದು, ಅಷ್ಟಬಾಹುಗಳನ್ನು ಹೊಂದಿದೆ. ಈ ಗುಹೆಗೆ ಪೂರ್ವಾಭಿಮುಖವಾಗಿ ಮತ್ತೊಂದು ಶಿಲಾಭೈರವಿ ವಿಗ್ರಹವಿದೆ. ಇದು ಹೊಯ್ಸಳರ ಕಾಲದ್ದು. ಹೊನ್ನಾದೇವಿಯ ದೇವಾಲಯವನ್ನು ಬಿಟ್ಟು ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಮುಂದೆ ಹೋದರೆ ಸಿಕ್ಕುವುದು ಪ್ರಸನ್ನಗಂಗಾಧರೇಶ್ವರ ಗುಹಾಂತರದೇವಾಲಯ. ಈ ದೇವಾಲಯ ದೊಡ್ಡ ಪ್ರಾಕಾರವನ್ನು ಹೊಂದಿದ್ದು ನಂದಿಮಂಟಪ, ನಾಲ್ಕು ಸುಂದರವಾದ ಘಂಟೆಯಾಕಾರದ ಹೊಯ್ಸಳ ಸ್ತಂಭಗಳನ್ನೊಳ ಗೊಂಡಿದೆ. ಇಲ್ಲಿಯ ಶಾಸನಗಳು ಶಿವಗಂಗನಾಥ ದೇವರಿಗೆ 1196ರಲ್ಲಿ ದತ್ತಿಬಿಟ್ಟ ವಿಷಯವನ್ನು ತಿಳಿಸುತ್ತವೆ. ಇಲ್ಲಿಯ ಬೃಹದಾಕಾರದ ಕಂಚಿನ ಘಂಟೆಯನ್ನು ಓಂಕಾರ ಘಂಟೆಯೆಂದು ಕರೆಯುತ್ತಾರೆ. ಶಾಸನದ ಪ್ರಕಾರ ಇದು ಒಂದನೆಯ ಕೆಂಪೇಗೌಡನ ಕಾಣಿಕೆಯೆಂದು ತಿಳಿದು ಬರುತ್ತದೆ. ದಕ್ಷಿಣಾಭಿಮುಖವಾಗಿರುವ ನವರಂಗದ ದ್ವಾರ, ದ್ವಾರಪಾಲಕ ರನ್ನು ಒಳಗೊಂಡಿದೆ. ಬಾಗಿಲುವಾಡದಲ್ಲಿ ಗಜಲಕ್ಷ್ಮಿಯ ವಿಗ್ರಹವಿದೆ. ಗುಹೆಯಲ್ಲಿರುವ ಕೆಲವು ವಿಗ್ರಹಗಳನ್ನು ಒಂದನೆಯ ಕೆಂಪೇಗೌಡ ಮತ್ತು ಆತನ ಕುಟುಂಬದವರು ಎನ್ನಲಾಗುತ್ತದೆ. ಕಲ್ಲಿನ ಮತ್ತು ಪಂಚಲೋಹದ ಕೆಲವು ವಿಗ್ರಹಗಳೂ ಇಲ್ಲಿವೆ. ಗರ್ಭಗುಡಿ ಸಣ್ಣ ಸುಕನಾಸಿಯನ್ನು ಹೊಂದಿದೆ. ಒಳಗೆ ಮೂರು ಅಡಿ ಎತ್ತರದ ಲಿಂಗವಿದೆ. ಬಹುಶಃ ಇದು ಹೊಯ್ಸಳರ ಕಾಲದ್ದಿರಬಹುದು. ಪೂರ್ವಾಭಿಮುಖ ವಾಗಿರುವ ಕೊಠಡಿಯೊಂದನ್ನು ಕೆಂಪೇಗೌಡನ ಖಜಾನೆಯೆಂದು ಹೇಳುವರು.

	ಒನಕೆಗಂಡಿಯ ಅನಂತರ ಕಡಿದಾದ ಮೆಟ್ಟಿಲುಗಳನ್ನು ಏರಿ ಮುಂದಕ್ಕೆ ಹೋದರೆ ಕೋಡುಗಲ್ಲು ಬಸವನ ವಿಗ್ರಹವಿದೆ. ಇಲ್ಲಿ ಶಾಸನದ ಪ್ರಕಾರ 1388ರಲ್ಲಿ ಈ ವಿಗ್ರಹವನ್ನು ಕಂಡರಿಸಿದಂತೆ ತಿಳಿದುಬರುತ್ತದೆ. ಇದನ್ನು ದಾಟಿ ಮುಂದೆ ಸಾಗಿದರೆ ವೀರಭದ್ರ ಗುಡಿ ಇದೆ. ಇದಕ್ಕೆ ಉತ್ತರಾಭಿಮುಖವಾಗಿ ಗಿರಿಯ ತುದಿಯಲ್ಲಿರುವ ತೀರ್ಥಕಂಬದಲ್ಲಿ ಮಕರ ಸಂಕ್ರಾಂತಿಯ ಕಾಲದಲ್ಲಿ ಗಂಗಾಧರೇಶ್ವರನ ಕಲ್ಯಾಣಕ್ಕೆ ಗಂಗೋದಕ ಬರುವುದೆಂದು ಪ್ರತೀತಿ. ಮಾರ್ಗಶಿರ ಮಾಸದ ಪೂರ್ಣಿಮೆಯ ದಿನ ಕೈಲಾಸ ದೀವಟಿಗೆಯನ್ನು ಹಚ್ಚುತ್ತಾರೆ. ತೀರ್ಥಕಂಬ ಅಷ್ಟಾಕೃತಿಯಲ್ಲಿದೆ. ಕಂಬದ ತಳಭಾಗದ ಶಾಸನಗಳ ಪ್ರಕಾರ ಹೊಯ್ಸಳ ಒಂದನೆಯ ನರಸಿಂಹನ ಆಳಿಕೆಯಲ್ಲಿ ಇದನ್ನು ಕೂಸ ಬಸವಣ್ಣ ಎಂಬವನು ನಿಲ್ಲಿಸಿದನೆಂದು ತಿಳಿದುಬರುತ್ತದೆ. ಶಾಂತಲದೇವಿಯ ಜ್ಞಾಪಕಾರ್ಥವಾಗಿ ಕಟ್ಟಿಸಿದ ಶಾಂತೇಶ್ವರ ದೇವಾಲಯ ಮಹಾದ್ವಾರದ ಹತ್ತಿರ ಇದೆ. ಶಾರದಾ ದೇವಾಲಯದಲ್ಲಿರುವ ಶಾರದಾಮೂರ್ತಿ ಅಮೃತಶಿಲೆಯಲ್ಲಿ ಕಡೆಯಲ್ಪಟ್ಟಿದೆ. ಇದರ ಪ್ರತಿಷ್ಠಾಪನೆ 1910ರಲ್ಲಿ ಆಯಿತೆಂದು ಹೇಳುವರು. ಈ ಕ್ಷೇತ್ರದ ಕಣ್ವತೀರ್ಥವನ್ನು 1652ರಲ್ಲಿ ಶಿವಾಜಿಯ ತಂದೆ ಷಹಾಜಿಯ ಆಳಿಕೆಯಲ್ಲಿ ಕಟ್ಟಿಸಿದುದೆಂದು ಶಾಸನದಿಂದ ತಿಳಿದುಬರುತ್ತದೆ. ಈ ಕ್ಷೇತ್ರವನ್ನು ಕುರಿತು ಕಳಲೆಯ ನಂಜರಾಜ 18ನೆಯ ಶತಮಾನದಲ್ಲಿ ಕಕೋದ್ಗಿರಿಮಹಾತ್ಮೆ ಎಂಬ ಗ್ರಂಥವನ್ನು ರಚಿಸಿದ್ದಾನೆ.

	ಈ ಕ್ಷೇತ್ರದಲ್ಲಿ ವರ್ಷಂಪ್ರತಿ ಎರಡು ಜಾತ್ರೆಗಳು ನಡೆಯುತ್ತವೆ. ಗಂಗಾಧರೇಶ್ವರನ ಜಾತ್ರೆ ಪ್ರತಿ ಜನವರಿಯಲ್ಲೂ ಹೊನ್ನಾದೇವಿಯ ಜಾತ್ರೆ ಪ್ರತಿ ಚೈತ್ರಬಹುಳದಲ್ಲೂ ನಡೆಯುತ್ತದೆ. ಈ ಊರಿನಲ್ಲಿ ಶ್ರೀಮಠ ಎಂಬ ಒಂದು ಮಠವಿದೆ.		
											(ಎಮ್.ಎಲ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ